Tuesday, September 8, 2009

ಹಾಡೋಣ ಬಾರಾ ಪ್ರೀತಿಯ ಚಿಲಿಪಿಲಿ...

ಪ್ರೀತಿಯ ಇನಿಯ,
ನಿನ್ನ ಸುಪ್ತ ಹೃದಯದ ಗೂಡಲಿ ಕುಳಿತಿರುವೆ ನಾ ಮರೆಯಾಗಿ... ನಿನ್ನ ಪ್ರೀತಿಯ ತಾಣದಲಿ ಕಾಯುತಿರುವೆ ನಿನ್ನ ಪ್ರೀತಿಗಾಗಿ. ನಿನ್ನ ಮೇಲಿನ ಪ್ರೇಮದ ದಾಹ ತಣಿಸಲು ಪದಪುಂಜಗಳೇ ಸಾಲದು ನಲ್ಲ... ಕವಿಗಳೆಷ್ಟೋ ಜನ ಸೋತಿರುವರು ನಮ್ಮಂತಹ ಪ್ರೇಮಿಗಳ ವರ್ಣನೆಗೆ ನಿಲುಕದೆ. ಇನಿಯನ ಸನಿಹದಿ ಹಕ್ಕಿಯಾಗಿ ಹಾರುವಾಸೆಯೆನಗೆ. ನಿನ್ನ ಮನದಲ್ಲಿ ಹುದುಗಿ ನಿನ್ನಲ್ಲೇ ನೆಲೆಯೂರುವಾಸೆ ನಿನ್ನಾಕೆಗೆ. ನಿಶ್ಯಬ್ದ ತೊರೆಯ ಕಂದಕದಿ ಮಂದಹಾಸದಿ ಸೆಳೆದೆ ಕಂಗಳಲಿ. ನನ್ನನು ಮರೆತೆ ನಿನ್ನೊಂದಿಗೆ ನಾನು.

ನಿನ್ನ ಕಂಡೊಡನೆ ಒಂದು ಕ್ಷಣ ವಿಚಲಿತಗೊಂಡಿತು ನನ್ನ ಮನ. ನಿನ್ನ ಹುಸಿಮುನಿಸು ತಂದಿತು ಹೃದಯದಿ ಕಂಪನ. ನೀನು ನನ್ನವನಾಗಬೇಕೆಂದು ಹಂಬಲಿಸುತ್ತಿತ್ತು ತನು. ನಾನೋಡಿದೆ ನಿನ್ನನು ಕಾಲೇಜಿನ ಪುಂಡರ ಗುಂಪಿನಲಿ. ಹೆದರಿತು ಮನ ನೀನಾಗುವೆಯೋ ಎಟುಕದ ನಕ್ಷತ್ರ ಎಂದು. ಒಮ್ಮೊಮ್ಮೆ ನಿನ್ನ ಕಂಡಾಗ ಕಣ್ಣು ಕಲೆಯುತ್ತಿತ್ತು ಇಬ್ಬರ ನೋಟ. ಆ ಕ್ಷಣ ಮರೆಯುತ್ತಿದ್ದೆ ನನ್ನ ನಾನು. ಉಸುಕಿನೊಡನೆ ಪಿಸುಮಾತನು ಬೆರೆಸುತ್ತಾ ಕೂತಿದ್ದೆ. ಕಡಲಿನಲಿ ತುಂಟ ಅಲೆಗಳ ನರ್ತನದ ಕ್ಷಣ ಬಂದೆ ನೀ ನೆನಪಿನ ಹಾದಿಯಲಿ. ನಿನ್ನ ಮುಗ್ಧ ಮುಖ ತೋರಿತು ಪ್ರೀತಿಯ ಹೊತ್ತಗೆಯ... ಮೂಡಿಸಿತು ಕವನಗಳ ಮೌನದ ತೇರಲಿ... ಸಾಗಿದೆ ನಿನ್ನ ನೆನಪಿನ ನೌಕೆಯಲಿ...

ನೀನಿದ್ದೆ ಹಲವಾರು ಕನ್ನಿಕೆಯರ ನಡುವಿನಲಿ... ಅದ ನೋಡಿದ ಮನ ಮರುಗಿತು ನಿನ್ನಲಿ ನಾನಿಲ್ಲ ಎಂದು. ನನ್ನ ಉದರದಿ ಉರಿಯಿತು ಮಾತ್ಸರ್ಯದ ಜ್ವಾಲೆ. ಕೊನೆಗೂ ಸಮಾಧಾನಿಸಿದೆ ಮನವ ಮಾತ್ಸರ್ಯವೂ ಪ್ರೀತಿಯ ಒಂದು ಮುಖವೆಂದು ತಿಳಿದು. ಆದರೂ ಮನವು ಮರುಗಿತು ನಿನ್ನ ಸನಿಹವ ನೆನೆಸಿ... ಹಲವು ಘಟನೆಗಳ ನೋಡಿ ನಿರ್ಧರಿಸಿದೆ ನಿನ್ನ ಮರೆಯಲು ಸಾಧ್ಯವಾಗದೆ ಹೋಯಿತು ನೀನಿರದೆ ಬಾಳಲು. ಒಂದು ಕ್ಷಣವೂ ಹೃದಯ ಮರೆತು ಕೂಡ ಮರೆಯದು ನಿನ್ನ ಹೆಸರ. ಬಡಿತವು ನಿಮಿಷಕ್ಕೂ ಹರಿಸುತಿಹುದು ನನ್ನೆದೆಯಲಿ ಪ್ರೀತಿಯ ಮಹಾಪೂರ... ಹಚ್ಚೆ ಬರೆದಿಹುದು ನಿನ್ನ ನಾಮವನು ನನ್ನ ತನುವಿನ ಪರದೆಯಲಿ, ಮನದಾಳದ ಭಾವದ ನೆನಪಿನಲಿ... ಹರೆಯವು ಮರೆಸುವುದು ಸಮಯವ, ಹೃದಯವ ಕರೆದೊಯ್ಯುವುದು ಎಟುಕದೆಡೆ. ಹುಚ್ಚು ಮನಸ್ಸು ಎಚ್ಚರವಿಲ್ಲದೆಯೇ ಕೊಚ್ಚಿಹೋಗುವುದು ಪ್ರೀತಿಯ ಪ್ರವಾಹದಲಿ... ಸವೆಸುವುದು ಪ್ರೇಮದ ಕಡಲಿನ ಉಸುಕಿನಲಿ, ತೋಯಿಸುವುದು ಸುಪ್ತವ ಸಪ್ತ ಭಾವದಲಿ.. ಹೆಸರಿಸುವುದು ಹಸನಾದ ಕನಸಿನಲಿ, ಮುನಿಸುವುದು ಝೇಂಕಾರದಿ ರೋಮಾಂಚನದಲಿ...!!

ಸದಾ ನೆನಹುತ್ತಿತ್ತು ಮನ ನಿನ್ನ ಜೊತೆಗಾಗಿ, ಕಾಯುತ್ತಿತ್ತು ಮರದಡಿ ನೀ ಬರುವ ಹಾದಿಯ, ಬರುವವರೆಗೂ ಬಳಲುತ್ತಿತ್ತು ತನು ಭಯದ ಬೆಂಗಾಡಾಗಿ.. ನಿನ್ನ ಆ ಮುಂಗುರುಳು ಬಾಗಿ ಕಚಗುಳಿಯಿಡುತ್ತಿತ್ತು, ಮನವನು ಆಕರ್ಷಿಸುತ್ತಿತ್ತು ಕ್ಷಣದಲಿ. ಆ ಸುಂದರ ನಗುವಿನ ಮುಗ್ಧತೆ ಮೂಡಿಸುತ್ತಿತ್ತು ಭಾವನೆಗಳ ಸ್ತಬ್ದದಿ. ಚಿತ್ರಿಸುತ್ತಿತ್ತು ತುಣುಕುಗಳ ಮನದ ಪುಟದಲಿ.. ನಾವಿಬ್ಬರೂ ಜೊತೆಯಾದೆವು ಕಣ್ಣಿನಲಿ.. ಸಮೀಪದಿ ಒಂದಾಯಿತು ಮನ ತಿಳಿಯದಲೆ. ಇಬ್ಬರೂ ಸನಿಹದಿ ಇರುವ ವೇಳೆ ಮೌನದ ಪುತ್ಥಳಿ ನಮ್ಮಿಬ್ಬರ ಬಳಿ. ನಯನದ ಓಟವೇ ತಿರುವುವುದು ಭಾವನೆಗಳ ಪುಟಗಳನು... ನಿನ್ನ ಅಂದಕೆ ಸೋತೆನು ನಾ. ಚೆಲುವಿಗೆ ಒಲವನೆರೆವೆ ಇನಿಯಾ ಬಯಸುವೆ ಸದಾ ಹೃದಯ ಚೋರನ ಬಿಸಿಯಪ್ಪುಗೆಯ...

ವರ್ಮನೂ ಸೋತ ಬಿಂಬಿಸಲಾಗದೆ ಪ್ರೀತಿಯ ಹೊಮ್ಮಿಸುವ ಭಾವ ಚಿತ್ರವ.. ಕವಿಯೂ ಸೋತ ಆ ಮನದ ಕಾಮನೆಗಳನ್ನು ಅಕ್ಷರಕ್ಕಿಳಿಸಲಾಗದೆ... ನಮ್ಮಿಬ್ಬರ ಹೃದಯಗಳ ಸೆಳೆತ ರಚಿಸಿರುವುದು ಕಲ್ಪನಾ ಲೋಕ, ಹೃದಯದಿ ಚಿತ್ರಣ ಬಿತ್ತಿಹುದು ನಾಕದಾ ಸುಖ. ಸ್ಮರಿಸುತಿದೆ ತುಟಿಗಳು ಜೇನಿನ ಸಿಹಿಯನು, ಮರೆಸುತಿದೆ ಮೈಮನ ಧರಣಿಯನು..!! ಪ್ರೇಮಕ್ಕೆ ಆದಿ ಅಂತ್ಯ ಇಲ್ಲವೆಂದು ಹೇಳುತ್ತಾರೆ. ಅದಕ್ಕೆ ಸಾಕ್ಷಿ ನಮ್ಮ ಪ್ರೀತಿ. ಪ್ರಾರಂಭದಿ ಎಷ್ಟು ಪ್ರಬಲವಾಗಿತ್ತೋ ಒಂದು ತೃಣದಷ್ಟೂ ಇಳಿಯಲಿಲ್ಲ. ನಿನ್ನ ಪ್ರೀತಿಗೆ ಆಕರ್ಷಿತಳಾದೆನಲ್ಲಾ ನಾನು... ಹಿಮಕರಗಿ ತ್ವರಿತವಾಗಿ ತೊರೆ ಸೇರುವ ರೀತಿ ನಿನ್ನೆದೆಯಲಿ ಅಡಗಿದೆ. ನೀ ಕೊಟ್ಟ ಕಾಣಿಕೆಯಾಗಿ ಪ್ರೀತಿಯಿಂದ ತುಂಬಿದೆ ಬಿಂದಿಗೆಯ ನಿನ್ನೆದೆ ಭಾವದ ಪುಟಗಳ ಮಸ್ತಕವ..!!

ಇನಿಯನ ಸನಿಹದಿ ಇರುವಾಸೆಯೆನಗೆ, ಬಯಸುವುದು ಮನ ನಲ್ಲನ ಸಿಹಿವಚನವ, ಕಾಣುವುದು ಕನಸಿನ ಮಹಲನು ಹುಚ್ಚುಮನ, ಕಾಡುವುದು ತನು ಕಾಯವ ನಿನ್ನ ಅದೃಶ್ಯಗಳಿಗೆಯಲಿ, ತಳದಲಿ ಅಡಗಿಹ ಚುಟುಕಗಳ ಒಳಗಿನ ಹದಿಹರೆಯದ ಮನಗಳ ಕೊಳಲಿನ ಧ್ವನಿಯಲಿ ಇದ್ದೆನು ಮಡುವಲಿ ಇನಿಯನ ಕನಸಿನ ಲೋಕದಲಿ..! ನೀನೆ ನನ್ನುಸಿರು, ನಿನ್ನಲೇ ನನ್ನ ಹೆಸರು, ನಿನ್ನಿಂದಲೇ ಹಸನಾಗಿದೆ ಬಾಳು, ನಿನಗೋಸ್ಕರ ಕಾಯುವೆನು ಜನುಮಜನುಮದವರೆಗೂ... ನೀನಿಲ್ಲದ ಬಾಳು ನಶ್ವರ ಊಹಿಸಲಾಗದು ಕ್ಷಣಗಳ... ನಿನಗಾಗಿ ತೆರೆದಿಹುದು ಹೃದಯದ ದ್ವಾರ. ಬಾ ಗೆಳೆಯ ಸೇರಿಕೋ ನನ್ನೆದೆಗೂಡಲಿ. ಹಾಡೋಣ ಪ್ರೀತಿಯ ಚಿಲಿಪಿಲಿ. ಬಾನಂಗಳದಲಿ ತೇಲಾಡೋಣ ತಾರೆಗಳಲ್ಲೊಂದಾಗಿ..!!

ನಿನ್ನ ಕಂಗಳ ಸ್ವಪ್ನದರ್ಶಿ
"ನಿನ್ನವಳು"

1 comment:

  1. Heyy,

    Very very matured and thoughtful writing. What makes it more beautiful is the usage of apt words and feelings..

    Great start. All the best..

    ReplyDelete