Tuesday, September 22, 2009

ಮುಗ್ದ ಮನದ ಮಾತು..

ಮನದೊಳು ಹುದುಗಿಹ ಭಾವದ ಬೆಸುಗೆಯು,
ಬಣ್ಣಿಸಲಾಗದು ಪದಗಳ ಪರಿಚಯ,
ಮಾತಲಿ ಬೆರೆಯುತ, ಮೌನದಿ ಸೆಳೆಯುತ,
ಚಿತ್ತದಿ ಸ್ಮರಿಸುತ, ಸುಪ್ತದಿ ನೆಲೆಯಾದೆ ನಿನ್ನಲಿ ಓ ಸ್ನೇಹಿತ..!

ನಿನ್ನೊಡನಾಟಡಿ ಆ ಸ್ವಲ್ಪ ಹೊತ್ತು ,
ಬೇಸರದ ಬೇಗೆಯನ್ನು ಹೊಡೆದೋಡಿಸುತ್ತಿತ್ತು ,
ಹೃದಯದಿ ಹುದುಗಿಹ ಮುಗ್ದ ಮಾತುಗಳು ,
ನನ್ನೆದೆಯಾಳದಿ ವಿಹರಿಸಿದ ಸ್ವಪ್ನಗಳು ..!

ಸಮಯ ಸರಿದ ಗಳಿಗೆ ತಿಳಿಯುತ್ತಿರಲಿಲ್ಲ,
ನಿನ್ನೊಂದಿಗೆ ನಾನಿರುವಾಗ ಮನ ಕೊರಗುತ್ತಿರಲಿಲ್ಲ,
ಹುಚ್ಚು ಭಾವನೆಗಳು ಚಿತ್ತಾರ ಬರೆದಿತ್ತು,
ಮತ್ತೇರಿದ ಮನಸು ತುಸು ಯೋಚಿಸುತ್ತಿತ್ತು ..!

ಅರಿಯದ ಗೊಂದಲದ ಭಾವ ಗುನುಗಿತು,
ಮನದಿ ನೀನ್ಯಾರೆಂದು ನನಗರಿಯದಾಯಿತು,
ಮನಸಿನ ಮಹಲಲಿ ಸ್ತಬ್ದ ಚಿತ್ರಣ,
ಹೆದರಿತು ಮನ ಭಯದಿ ಆ ಕ್ಷಣ ..!

ಭಾವಗಳಾ ಬುತ್ತಿಯಲಿ ಮಂಕಾದೆ ನಾನು,
ಚಿಗುರಿದಾ ಸ್ವಪ್ನಕ್ಕೆ ನೀರೆರೆದೆ ನೀನು,
ಮನಸು ಮಾತಾಡಿದೆ ಮೌನದಲಿ,
ಚಿತ್ತ ತೇಲಾಡಿದೆ ಕನಸಿನಲಿ..!

ಭಯದ ಬಿರುಗಾಳಿಯಲಿ ಈ ಹೃದಯ,
ಮನದಿ ಮರೆಯಾಯಿತು ಓ ಗೆಳೆಯಾ,
ಸಮಯ ಸರಿಯಿತು, ವಿಚಲಿತಗೊಂಡಿತು,
ಮನದೊಳು ಮೌನ ಮುಸುಕಿತು, ನೀನಿಲ್ಲದಾ ಹೊತ್ತು..!

ಅಧರ ಅದುರಿತು, ಭಾವ ಧುಮ್ಮಿಕ್ಕಿತು,
ನೆನಹುಗಳು ಕಂಪಿಸಿ ತೇಲಾಡಿತು,
ನಿಲುಕದ ಭಾವವು ಚಿಲುಮೆಯ ಚರಣವು,
ಹೊಮ್ಮಿತು ತವಕದಿ ಅದ್ಬುತ ಕವನವು..!

ಆದರೂ ತಿಳಿಯಲಿಲ್ಲ ಭಾವದ ಬಿನ್ನಾಣ,
ಏನಾಯ್ತೋ ಈ ಮನಕೆ ನೀನಾದೆ ಪ್ರಾಣ,
ಭಾವ ಸಾಗರದ ಚಿಮ್ಮುವ ಅಲೆಯಲಿ ಆ ಹೊತ್ತಗೆಯಾ..,
ಪ್ರಶ್ನೆಗಳೇ ಉತ್ತರವಾಗಿ ಕಾಡಿತು ಕೊನೆಗೂ ನನ್ನೆದೆಯಾ...!!!

Tuesday, September 15, 2009

ನಾನು ನೀನು

ನೀನು ನಾನಾದಾಗ
ನಾನು ನೀನಾದೆ..
ನೀನು ಅವನಾದಾಗ
ನಾನು ಅವಳಾದೆ
ನೀನು ಅವಳಾದಾಗ
ನಾನು ಮರುಳಾದೆ
ನೀನು ಮರುಳಾದಾಗ
ನಾನು ಕೊಳಲಾದೆ
ನೀನು ಕೊಳಲಾದಾಗ
ನಾನು ದನಿಯಾದೆ
ನೀನು ದನಿಯಾದಾಗ
ನಾನು ಕೊರಳಾದೆ
ನೀನು ಕೊರಳಾದಾಗ
ನಾನು ಸ್ವರವಾದೆ
ನೀನು ಸ್ವರವಾದಾಗ
ನಾನು ಕರಗಿದೆ ..!!!

Thursday, September 10, 2009

ಓ ಪ್ರಿಯತಮ ಇದು ನ್ಯಾಯನಾ ...!!!???

ಪ್ರಿಯಾ.. ನೀನೇಕೆ ದೂರಾದೆ ನನ್ನಿಂದ ,
ಮನ ಮರುಗುತಿಹುದು ನಿನ್ನಯ ವಿರಹದಿಂದ ..,
ಕನಸೆಲ್ಲ ಕಾಡುತಿಹುದು,
ಮನಸೆಲ್ಲ ಬಾಡುತಿಹುದು,
ಪ್ರೀತಿಯ ಬರ ಬಡಿದಾ ಮನದ ದುಗುಡದಿಂದ ..
ಇನಿಯ ನೀ ಏಕೆ ಹೀಗಾದೆ ..?
ನೀನೇಕೆ ದೂರಾದೆ ನನ್ನಿಂದ ....??

ದಟ್ಟಡವಿಯಂತೆ ಮನದಲಿ ಕಪ್ಪಿಟ್ಟಿತು .,
ನಿನ್ನ ಸನಿಹವ ಬಯಸಿತು ತನು ,
ನಿನ್ನ ನೆನಪಿನಲಿ ದಿನವೆಲ್ಲ ಮೈಮರೆತು ,
ಕಾಯುತಿರುವೆ ನೀ ಬರುವ ಹಾದಿಯೆಡೆಗೆ ಮೊಗಮಡಿ ನಿಂತು.,
ನಲ್ಲ ನೀನೇಕೆ ಬರದೆ ಹೋದೆ ..,?
ನೀನೇಕೆ ದೂರಾದೆ ನನ್ನಿಂದ ....??

ಸ್ವರಗಳ ನಿನಾದ ಕೇಳುವ ಸಮಯದಿ ,
ಮನದ ಕಷ್ಟಗಳ ಸೆಲೆಯಲ್ಲಿ ನೀ ತುಂಬಿ ಬಂದೆ,
ನನ್ನ ಎದೆಯನ್ಗಳದಲಿ ಬಿಂಬಿತವಾದ ನಿನ್ನ ,
ಮರೆಯುವ ಪರಿ ನಾ ತಿಳಿಯದೆ ಕಂಗಾಲಾದೆ ,
ಜೀವನದಿ ಜೊತೆಯಾದ ಎಲ್ಲ ಕಹಿಗಳ ಮರೆತರೂ ..,
ಪ್ರಿಯತಮಾ .. ನಿನ್ನನೇ ನಾನೇಕೆ ಬಯಸಿದೆ ,
ನೀನೇಕೆ ದೂರಾದೆ ನನ್ನಿಂದಾ ..?
ನಿನಗೋಸ್ಕರ ಕಾಯುತಿರುವೆನು ಈ ತುಂಬು ಹೃದಯದಿಂದ ..!!!

Wednesday, September 9, 2009

ಅತಿಯಾದ ಪ್ರೀತಿಗೆ....

ಅತಿಯಾದ ಪ್ರೀತಿಗೆ ಮಾರು ಹೋದೆನಲ್ಲಾ ಚೆಲುವೆ..!
ಅದರೊಳಗಣ ಗುಟ್ಟು ನಾ ಅರಿಯಲಿಲ್ಲವೇ ..,
ನಾ ಜಾರಿದೆನಲ್ಲ ನಿನ್ನ ಪ್ರೀತಿಯ ಬುಟ್ಟಿಗೆ ..!!
ಇಟ್ಟಿತೊಂದು ಬರೆಯ ಬುಟ್ಟಿಯಲ್ಲಿಯ ಕಟ್ಟಿಗೆ ..!!!

ನೂಪುರವ ಧರಿಸಿ ಮನಸನ್ನು ಕ್ಷಣದಲ್ಲೇ ಸೆಳೆದು..,
ನಿನಾದದ ಗುಂಗಿಗೆ ಮನ ನಿನ್ನತ್ತ ಅಲೆದು ,
ಸ್ವಪ್ನಗಳ ಸಾಗರದತ್ತ ಈ ಸುಪ್ತ ಹರಿದು ..,!
ನಿನ್ನಲ್ಲೇ ನೆಲೆಯಾದೆ ನೆನಪುಗಳ ನೆನೆದು ..!!!

ನಿನ್ನ ಆ ಮುಂಗುರುಳು ಸೆಳೆಯಿತು ಮನವ ಕ್ಷಣದಲಿ,
ಹೃದಯವು ತೊದಲಿತು ಭಾವದಲಿ ..!
ಚಿತ್ತದಲಿ ಕೋಲಾಹಲದ ಛಾಯೆ ಚದುರಿತು ಭರದಲಿ,
ಮಾತು ಮರೆತು ಮಂಕಾದೆನು ಮೌನದಲಿ ..!!!

ಆದರೂ ಮನ ಹಂಬಲಿಸುತ್ತಿತ್ತು ನಿನ್ನನೇ..,
ಚಿತ್ತದಿ ಬಿಂಬಿಸುತ್ತಿತ್ತು ನಿನ್ನ ಕನಸನೆ ..,
ಮನದಿ ಮಂತ್ರಿಸುತ್ತಿತ್ತು ನಿನ್ನ ಮಾತನೆ ..!!
ನಾ ಮರೆತಿದ್ದೆ ನಿನ್ನೊಂದಿಗೆ ನನ್ನನೇ..,
ಬೆರೆತಿದ್ದೆ ನಿನ್ನಲೊಂದಾಗಿ ನಿನ್ನೊಡನೆ.. !!!




Tuesday, September 8, 2009

ಬಚ್ಚಿಟ್ಟ ಪ್ರೀತಿ.....

ಎದೆಯಾಂತರಾಳದಲಿ ಮೂಡಿತು,
ಅರಿಯದೆಲೆ ಚಿಗುರೊಡೆಯಿತು,
ಮನಸಿನಲಿ ಮನೆ ಮಾಡಿತು,
ಕನಸಿನಲಿ ಸ್ವರ ಮೀಟಿತು,
ಪ್ರೀತಿಯ ಒಲುಮೆ..!

ಪ್ರೀತಿಸಿದೆ ಪ್ರೀತಿಯ ಮನದಾಳದಲಿ
ಪೂಜಿಸಿದೆ ತನುವಿನಲಿ ಪ್ರೀತಿಯ ನುಡಿಗಳ
ಬಯಸಿದೆ ತಿಳಿಸಲು ಪ್ರೀತಿಯ,
ಅಂಜಿದೆ ಮನದಾಳದಲಿ ಅರಿಯದ ಭಾವದ ಗದ್ಗದಿತದಿ...!

ಹೃದಯದಿ ಪ್ರೀತಿಯ..,
ಪ್ರೀತಿಸಿದೆ ಪ್ರೀತಿಯಲಿ
ಪ್ರೀತಿಯ ಪ್ರೀತಿಸಿದರೂ
ಪರಿತಪಿಸಿದೆ ಪಡೆಯಲು
ಹಂಬಲಿಸಿದೆ ತೆರೆದಿಡಲುಮನದೊಳು ಬಚ್ಚಿಟ್ಟ ಪ್ರೀತಿಯ ..!!

ಕೊನೆವರೆಗೂ ಸಾಗಿದೆನು
ಪ್ರೀತಿಯ ನೌಕೆಯಲಿ
ಪ್ರೀತಿಗಾಗಿ ಪ್ರೀತಿಯ ಪ್ರೀತಿಸಲು
ಪ್ರೀತಿಗೋಸ್ಕರ ಪ್ರೀತಿಯಲಿ ಪರದಾಡಲು,
ಪ್ರೀತಿಯನ್ನೇ ಉಸಿರಾಗಿಸಿ ಉಸಿರಾಡಲು... !!!

ಬರೆದೆನೊಂದು ಕವಿತೆಯ ..!!!

ಬರೆದೆನೊಂದು ಕವಿತೆಯ..,
ಹೊರಚಲ್ಲಿ ಮನದ ಭಾವನೆಯ..!!
ಸ್ವಪ್ನ ಫಲದ ರಸವ ಅಮುಕಿ ,
ಚಂದನದ ಸುಗಂಧ ಬೆರೆಸಿ ,
ಜೀವನಾಡಿಯಲ್ಲಿ ಮನದ ಪದಗಳನ್ನು ಜೋಡಿಸಿ,
ವೀಣೆಯಲ್ಲಿ ಸ್ವರಗಳನ್ನು ನುಡಿಸಿ,
ಕೊಳಲ ದನಿಯನ್ನು ಸ್ಮರಿಸಿ,
ಚಿತ್ತದ ದುಗುಡವ ಬದಿಗಿರಿಸಿ ,
ಸುಪ್ತದಿ ಸಂತೋಷದ ಹಚ್ಚೆಯ ಬಿಡಿಸಿ,
ಭಾವದಿ ಬಯಕೆಯ ಭ್ರಮಿಸಿ,
ಮುಗ್ದದಿ ಮಮತೆಯ ಮುಡಿಸಿ,
ಸ್ತಬ್ದದಿ ಸವಿಯನು ಸ್ಪರ್ಶಿಸಿ,
ಪದಗಳ ಪ್ರಣಯದಿ ಪಸರಿಸಿ,
ಹೃದಯದಿ ಹರೆಯವ ಹೆಣೆದು,
ಕದಲದ ಕ್ಷಣಗಳ ಕಡೆದು,
ಮರೆಯದ ಮನಗಳ ಮಿಡಿದು,
ಚಂಚಲ ಚಿತ್ತಗಳ ಚುಂಬಿತ ಚರಣಗಳ,
ಭಾವದ ಬಿಂದಿಗೆಯಲಿ ಬಳಿದು,
ಹೊಳೆಯಾಗಿ ಹರಿಸಿದೆ ಭಾವ ತರಂಗಗಳ ಜೋಡಿಸಿ,..!!
ಬರೆದೆನೊಂದು ಕವಿತೆಯ...,
ಪದಗಳಾಗಿ ಹೋದರೂ ತುಂಬಲಿಲ್ಲ ಹಾಳೆಯಾ.....!!!

ಸವಿ ಸವಿ ನೆನಪು ...!!!

ಮನದಾಳದಿ ಹರಿಯುತಿದೆ,
ಸ್ವರಗಳ ತಾ ಮೀಟುತಿದೆ,
ನೆನಪಿನಾ ಪುಟಗಳ ತೆರೆದು..!!
ಭಾವದಲಿ ತೊದಲುತಿದೆ,
ಚಿತ್ತದಲಿ ಸ್ಮರಿಸುತಿದೆ ,
ಜೀವದಲಿ ಜಿನುಗುತಿದೆ , ಆ ದಿನಗಳ ನೆನೆದು ..!!!

ತನುವಿನೊಳು ಕಾಡುತಿದೆ ,
ಪ್ರೀತಿಯೊಳು ಹಾಡುತಿದೆ ,
ಸುಪ್ತದೊಳು ತೂಗುತಿದೆ ತುಡಿದು ..!!
ಸ್ತಬ್ದದಲಿ ಜಾರುತಿದೆ ,
ಚೆಲುವಿನಲಿ ಚಿಮ್ಮುತಿದೆ ,
ತೇಲಿಸಿದೆ ಹೃದಯವ , ಆ ಕ್ಷಣಗಳ ನೆನೆದು ...!!!

ಬುತ್ತಿಯೊಳು ಬಿತ್ತುತಿದೆ ,
ಕವನದಲಿ ಕಾಯುತಿದೆ ,
ಸುಂದರ ಸ್ವಪ್ನಗಳ ಕಳೆದು ..!!
ಮಾತುಗಳ ಹವಣಿಸುತಿದೆ
ಮೌನದಲಿ ಮಣಿಯುತಿದೆ ,
ಕುಣಿದಾಡಿದೆ ಹರ್ಷದಲಿ , ಆ ಕನಸುಗಳ ನೆನೆದು ...!!!

ಹಾಡೋಣ ಬಾರಾ ಪ್ರೀತಿಯ ಚಿಲಿಪಿಲಿ...

ಪ್ರೀತಿಯ ಇನಿಯ,
ನಿನ್ನ ಸುಪ್ತ ಹೃದಯದ ಗೂಡಲಿ ಕುಳಿತಿರುವೆ ನಾ ಮರೆಯಾಗಿ... ನಿನ್ನ ಪ್ರೀತಿಯ ತಾಣದಲಿ ಕಾಯುತಿರುವೆ ನಿನ್ನ ಪ್ರೀತಿಗಾಗಿ. ನಿನ್ನ ಮೇಲಿನ ಪ್ರೇಮದ ದಾಹ ತಣಿಸಲು ಪದಪುಂಜಗಳೇ ಸಾಲದು ನಲ್ಲ... ಕವಿಗಳೆಷ್ಟೋ ಜನ ಸೋತಿರುವರು ನಮ್ಮಂತಹ ಪ್ರೇಮಿಗಳ ವರ್ಣನೆಗೆ ನಿಲುಕದೆ. ಇನಿಯನ ಸನಿಹದಿ ಹಕ್ಕಿಯಾಗಿ ಹಾರುವಾಸೆಯೆನಗೆ. ನಿನ್ನ ಮನದಲ್ಲಿ ಹುದುಗಿ ನಿನ್ನಲ್ಲೇ ನೆಲೆಯೂರುವಾಸೆ ನಿನ್ನಾಕೆಗೆ. ನಿಶ್ಯಬ್ದ ತೊರೆಯ ಕಂದಕದಿ ಮಂದಹಾಸದಿ ಸೆಳೆದೆ ಕಂಗಳಲಿ. ನನ್ನನು ಮರೆತೆ ನಿನ್ನೊಂದಿಗೆ ನಾನು.

ನಿನ್ನ ಕಂಡೊಡನೆ ಒಂದು ಕ್ಷಣ ವಿಚಲಿತಗೊಂಡಿತು ನನ್ನ ಮನ. ನಿನ್ನ ಹುಸಿಮುನಿಸು ತಂದಿತು ಹೃದಯದಿ ಕಂಪನ. ನೀನು ನನ್ನವನಾಗಬೇಕೆಂದು ಹಂಬಲಿಸುತ್ತಿತ್ತು ತನು. ನಾನೋಡಿದೆ ನಿನ್ನನು ಕಾಲೇಜಿನ ಪುಂಡರ ಗುಂಪಿನಲಿ. ಹೆದರಿತು ಮನ ನೀನಾಗುವೆಯೋ ಎಟುಕದ ನಕ್ಷತ್ರ ಎಂದು. ಒಮ್ಮೊಮ್ಮೆ ನಿನ್ನ ಕಂಡಾಗ ಕಣ್ಣು ಕಲೆಯುತ್ತಿತ್ತು ಇಬ್ಬರ ನೋಟ. ಆ ಕ್ಷಣ ಮರೆಯುತ್ತಿದ್ದೆ ನನ್ನ ನಾನು. ಉಸುಕಿನೊಡನೆ ಪಿಸುಮಾತನು ಬೆರೆಸುತ್ತಾ ಕೂತಿದ್ದೆ. ಕಡಲಿನಲಿ ತುಂಟ ಅಲೆಗಳ ನರ್ತನದ ಕ್ಷಣ ಬಂದೆ ನೀ ನೆನಪಿನ ಹಾದಿಯಲಿ. ನಿನ್ನ ಮುಗ್ಧ ಮುಖ ತೋರಿತು ಪ್ರೀತಿಯ ಹೊತ್ತಗೆಯ... ಮೂಡಿಸಿತು ಕವನಗಳ ಮೌನದ ತೇರಲಿ... ಸಾಗಿದೆ ನಿನ್ನ ನೆನಪಿನ ನೌಕೆಯಲಿ...

ನೀನಿದ್ದೆ ಹಲವಾರು ಕನ್ನಿಕೆಯರ ನಡುವಿನಲಿ... ಅದ ನೋಡಿದ ಮನ ಮರುಗಿತು ನಿನ್ನಲಿ ನಾನಿಲ್ಲ ಎಂದು. ನನ್ನ ಉದರದಿ ಉರಿಯಿತು ಮಾತ್ಸರ್ಯದ ಜ್ವಾಲೆ. ಕೊನೆಗೂ ಸಮಾಧಾನಿಸಿದೆ ಮನವ ಮಾತ್ಸರ್ಯವೂ ಪ್ರೀತಿಯ ಒಂದು ಮುಖವೆಂದು ತಿಳಿದು. ಆದರೂ ಮನವು ಮರುಗಿತು ನಿನ್ನ ಸನಿಹವ ನೆನೆಸಿ... ಹಲವು ಘಟನೆಗಳ ನೋಡಿ ನಿರ್ಧರಿಸಿದೆ ನಿನ್ನ ಮರೆಯಲು ಸಾಧ್ಯವಾಗದೆ ಹೋಯಿತು ನೀನಿರದೆ ಬಾಳಲು. ಒಂದು ಕ್ಷಣವೂ ಹೃದಯ ಮರೆತು ಕೂಡ ಮರೆಯದು ನಿನ್ನ ಹೆಸರ. ಬಡಿತವು ನಿಮಿಷಕ್ಕೂ ಹರಿಸುತಿಹುದು ನನ್ನೆದೆಯಲಿ ಪ್ರೀತಿಯ ಮಹಾಪೂರ... ಹಚ್ಚೆ ಬರೆದಿಹುದು ನಿನ್ನ ನಾಮವನು ನನ್ನ ತನುವಿನ ಪರದೆಯಲಿ, ಮನದಾಳದ ಭಾವದ ನೆನಪಿನಲಿ... ಹರೆಯವು ಮರೆಸುವುದು ಸಮಯವ, ಹೃದಯವ ಕರೆದೊಯ್ಯುವುದು ಎಟುಕದೆಡೆ. ಹುಚ್ಚು ಮನಸ್ಸು ಎಚ್ಚರವಿಲ್ಲದೆಯೇ ಕೊಚ್ಚಿಹೋಗುವುದು ಪ್ರೀತಿಯ ಪ್ರವಾಹದಲಿ... ಸವೆಸುವುದು ಪ್ರೇಮದ ಕಡಲಿನ ಉಸುಕಿನಲಿ, ತೋಯಿಸುವುದು ಸುಪ್ತವ ಸಪ್ತ ಭಾವದಲಿ.. ಹೆಸರಿಸುವುದು ಹಸನಾದ ಕನಸಿನಲಿ, ಮುನಿಸುವುದು ಝೇಂಕಾರದಿ ರೋಮಾಂಚನದಲಿ...!!

ಸದಾ ನೆನಹುತ್ತಿತ್ತು ಮನ ನಿನ್ನ ಜೊತೆಗಾಗಿ, ಕಾಯುತ್ತಿತ್ತು ಮರದಡಿ ನೀ ಬರುವ ಹಾದಿಯ, ಬರುವವರೆಗೂ ಬಳಲುತ್ತಿತ್ತು ತನು ಭಯದ ಬೆಂಗಾಡಾಗಿ.. ನಿನ್ನ ಆ ಮುಂಗುರುಳು ಬಾಗಿ ಕಚಗುಳಿಯಿಡುತ್ತಿತ್ತು, ಮನವನು ಆಕರ್ಷಿಸುತ್ತಿತ್ತು ಕ್ಷಣದಲಿ. ಆ ಸುಂದರ ನಗುವಿನ ಮುಗ್ಧತೆ ಮೂಡಿಸುತ್ತಿತ್ತು ಭಾವನೆಗಳ ಸ್ತಬ್ದದಿ. ಚಿತ್ರಿಸುತ್ತಿತ್ತು ತುಣುಕುಗಳ ಮನದ ಪುಟದಲಿ.. ನಾವಿಬ್ಬರೂ ಜೊತೆಯಾದೆವು ಕಣ್ಣಿನಲಿ.. ಸಮೀಪದಿ ಒಂದಾಯಿತು ಮನ ತಿಳಿಯದಲೆ. ಇಬ್ಬರೂ ಸನಿಹದಿ ಇರುವ ವೇಳೆ ಮೌನದ ಪುತ್ಥಳಿ ನಮ್ಮಿಬ್ಬರ ಬಳಿ. ನಯನದ ಓಟವೇ ತಿರುವುವುದು ಭಾವನೆಗಳ ಪುಟಗಳನು... ನಿನ್ನ ಅಂದಕೆ ಸೋತೆನು ನಾ. ಚೆಲುವಿಗೆ ಒಲವನೆರೆವೆ ಇನಿಯಾ ಬಯಸುವೆ ಸದಾ ಹೃದಯ ಚೋರನ ಬಿಸಿಯಪ್ಪುಗೆಯ...

ವರ್ಮನೂ ಸೋತ ಬಿಂಬಿಸಲಾಗದೆ ಪ್ರೀತಿಯ ಹೊಮ್ಮಿಸುವ ಭಾವ ಚಿತ್ರವ.. ಕವಿಯೂ ಸೋತ ಆ ಮನದ ಕಾಮನೆಗಳನ್ನು ಅಕ್ಷರಕ್ಕಿಳಿಸಲಾಗದೆ... ನಮ್ಮಿಬ್ಬರ ಹೃದಯಗಳ ಸೆಳೆತ ರಚಿಸಿರುವುದು ಕಲ್ಪನಾ ಲೋಕ, ಹೃದಯದಿ ಚಿತ್ರಣ ಬಿತ್ತಿಹುದು ನಾಕದಾ ಸುಖ. ಸ್ಮರಿಸುತಿದೆ ತುಟಿಗಳು ಜೇನಿನ ಸಿಹಿಯನು, ಮರೆಸುತಿದೆ ಮೈಮನ ಧರಣಿಯನು..!! ಪ್ರೇಮಕ್ಕೆ ಆದಿ ಅಂತ್ಯ ಇಲ್ಲವೆಂದು ಹೇಳುತ್ತಾರೆ. ಅದಕ್ಕೆ ಸಾಕ್ಷಿ ನಮ್ಮ ಪ್ರೀತಿ. ಪ್ರಾರಂಭದಿ ಎಷ್ಟು ಪ್ರಬಲವಾಗಿತ್ತೋ ಒಂದು ತೃಣದಷ್ಟೂ ಇಳಿಯಲಿಲ್ಲ. ನಿನ್ನ ಪ್ರೀತಿಗೆ ಆಕರ್ಷಿತಳಾದೆನಲ್ಲಾ ನಾನು... ಹಿಮಕರಗಿ ತ್ವರಿತವಾಗಿ ತೊರೆ ಸೇರುವ ರೀತಿ ನಿನ್ನೆದೆಯಲಿ ಅಡಗಿದೆ. ನೀ ಕೊಟ್ಟ ಕಾಣಿಕೆಯಾಗಿ ಪ್ರೀತಿಯಿಂದ ತುಂಬಿದೆ ಬಿಂದಿಗೆಯ ನಿನ್ನೆದೆ ಭಾವದ ಪುಟಗಳ ಮಸ್ತಕವ..!!

ಇನಿಯನ ಸನಿಹದಿ ಇರುವಾಸೆಯೆನಗೆ, ಬಯಸುವುದು ಮನ ನಲ್ಲನ ಸಿಹಿವಚನವ, ಕಾಣುವುದು ಕನಸಿನ ಮಹಲನು ಹುಚ್ಚುಮನ, ಕಾಡುವುದು ತನು ಕಾಯವ ನಿನ್ನ ಅದೃಶ್ಯಗಳಿಗೆಯಲಿ, ತಳದಲಿ ಅಡಗಿಹ ಚುಟುಕಗಳ ಒಳಗಿನ ಹದಿಹರೆಯದ ಮನಗಳ ಕೊಳಲಿನ ಧ್ವನಿಯಲಿ ಇದ್ದೆನು ಮಡುವಲಿ ಇನಿಯನ ಕನಸಿನ ಲೋಕದಲಿ..! ನೀನೆ ನನ್ನುಸಿರು, ನಿನ್ನಲೇ ನನ್ನ ಹೆಸರು, ನಿನ್ನಿಂದಲೇ ಹಸನಾಗಿದೆ ಬಾಳು, ನಿನಗೋಸ್ಕರ ಕಾಯುವೆನು ಜನುಮಜನುಮದವರೆಗೂ... ನೀನಿಲ್ಲದ ಬಾಳು ನಶ್ವರ ಊಹಿಸಲಾಗದು ಕ್ಷಣಗಳ... ನಿನಗಾಗಿ ತೆರೆದಿಹುದು ಹೃದಯದ ದ್ವಾರ. ಬಾ ಗೆಳೆಯ ಸೇರಿಕೋ ನನ್ನೆದೆಗೂಡಲಿ. ಹಾಡೋಣ ಪ್ರೀತಿಯ ಚಿಲಿಪಿಲಿ. ಬಾನಂಗಳದಲಿ ತೇಲಾಡೋಣ ತಾರೆಗಳಲ್ಲೊಂದಾಗಿ..!!

ನಿನ್ನ ಕಂಗಳ ಸ್ವಪ್ನದರ್ಶಿ
"ನಿನ್ನವಳು"