Tuesday, July 27, 2010

ಕನಸಲೂ ನೀನೆ ..... ಮನಸಲೂ ನೀನೆ

ಕವಿಯ ಮನಸ್ಸಿನಲಿ ಪದವಾದೆ ನೀನು,
ನಾಕಂಡ ಸ್ವಪ್ನಕ್ಕೆ ನೀರೆರೆದೆ ನೀನು,
ನಿನ್ನ ನಾಮಸ್ಮರಣೆಯಲಿ ಪ್ರತಿನಿತ್ಯ ನಾನು,
ನನ್ನಂತರಂಗದ ತುಂಬೆಲ್ಲ ನೀನು....!! ಬರಿನೀನು ... !!


ಕಾಲೇಜಿನ ಕ್ಯಾಂಟೀನಿನ ಬಳಿ ನಾನೋಡಿದೆ ನಿನನ್ನು..
ಸ್ತಬ್ಧವಾಯಿತು ಆ ಕ್ಷಣ ಮಂಕಾದೆ ನಾನು,
ಆ ನಿನ್ನ ಮುಂಗುರುಳು ಬಾಗಿ ಹಣೆಗೆ ಮುತ್ತಿಕ್ಕುತ್ತಿದ್ದರೆ..,
ನನಗೆ ತಿಳಿಯುತ್ತಿರಲಿಲ್ಲ ಕಾಫಿಗೆ ಹಾಕದಿದ್ದರೂ ಸಕ್ಕರೆ..!!

ಕಣ್ತುಂಬ ಕನಸು ತುಂಬ ನೀನೆ ತುಂಬಿರುವೆ.
ಬಾಯ್ತುಂಬ ಒಮ್ಮೆ ನಕ್ಕರೆ ನಿನ್ನಲ್ಲೆ ಒಂದಾಗಿ ಬಿಡುವೆ.,
ಮನದಲ್ಲೆ ಮನೆ ಮಾಡಿ ಹಚ್ಚೆ ಬರೆದಿರುವೆ..
ಸ್ವರದಲ್ಲ್ಲೆ ಸೊಗಸಾಗಿ ಮೋಡಿ ಮಾಡಿರುವೆ..!!

ನೀನನ್ನ ನೋಡದಿದ್ದರೂ ನಾ ನಿನ್ನನೇ ನೋಡುವೆ.,
ನೀ ನನ್ನತ್ತ ಜಾರದಿದ್ದರೂ ನಾ ನಿನ್ನಲ್ಲೆ ನೆಲೆಯೂರುವೆ,
ನೀ ನಸು ನಕ್ಕರೆ ನಾಕಾಣುವೆ ಸಾವಿರ ಕನಸು..
ನಿನ್ನಲೊಂದಾಗಲು ಹಾತೊರೆಯುತ್ತಿದೆ ಈ ಮನಸು..!!

ಮುಗ್ದ ಮನದ ಶುದ್ಧ ಪ್ರೀತಿಯ ನಾನೆರೆವೆ ನಿನಗಾಗಿ.,
ಭೋರ್ಗರೆವ ಭಾವತರಂಗಗಳ ಬಿಂಬಿಸುವೆ ಮನದಾಳದ ಸ್ವಚ್ಛಂದ ಪ್ರೀತಿಗಾಗಿ.
ನೆನಪುಗಳ ಬುತ್ತಿಯನು ಚಿತ್ತದಲಿ ತುತ್ತಿಡುವೆ ಸುಂದರ ಸ್ವಪ್ನಗಳ ಸವಿಯಾಗಿ..
ನಿನ್ನಾಳದಿ ನನ್ನೆಲ್ಲ ನೆನಹುಗಳ ಕುರುಹಿನೊಂದಿಗೆ ನನ್ನಲೊಂದಾಗು...
ನನ್ನ ಮನಸಿನೊಂದಿಗೆ.. ನನ್ನ ಮಾತಿನೊಂದಿಗೆ... ನನ್ನ ಭಾವದೊಂದಿಗೆ...!!

Tuesday, May 25, 2010

ಇಳೆಯ ಮಥನ..!!

"ಅಕ್ಷತ"ವಾದ ಪೃಥ್ವಿಯ ನಡುವಿನಲ್ಲಿ,
"ಚೈತ್ರ"ದ ಚಿಗುರಿನ ಕಂಪಿನ ಹೊನಲಿನಲ್ಲಿ..
ಸುಂದರ ಸ್ವಪ್ನಗಳಾ "ಶಿಲ್ಪ"ದ ಚಿತ್ತಾರದಲ್ಲಿ,
"ಶ್ರೆಯೂ"ಸ್ಸಿನ ಮೊರೆ ಹೊಕ್ಕ ಸ್ವಚ್ಛಂದದ ಬಾನಿನಲ್ಲಿ..!!

"ಅನಂತಾ"ನಂತ ಕಾನನಗಳ ನಡುವಿನಲ್ಲಿ,
"ಪ್ರಶಾಂತ"ತೆಯ ಚಿಗುರೊಡೆದಿತ್ತು ಸುಂದರ ಪ್ರಕೃತಿಯಲ್ಲಿ,
ಕಲರವ ಮಿಡಿಯುವ ಸ್ವರಗಳ ಮೀಟುವ..
"ಹೇಮಾ"ಂಕುರದಲ್ಲಿ..
ಬಿನ್ನಾಣದಿ "ಅಭಯ" ಹಸ್ತ ನೀಡುತ ಮುದ ತಂದಿತು,
ಮನಕೆ ಶುಭ ಗಳಿಗೆಯಲ್ಲಿ..!!

ಸು"ಮಧು"ರ ಕಂಠದಿ ಮೈಮನ ಮರೆಸುವ,
"ಕನ್ನಿಕೆ"ಯರ ಮನದನ್ನೆಯಲ್ಲಿ..
ತಾ ಮುಂದು ಎನ್ನುವ ನೀ "ಸೈ ಫ಼"ಕ್ವತೆಯ ಬುತ್ತಿಯ ಬಿತ್ತುತ,
ನೀಲಾಕಾಶದಿ "ಕಿರಣ"ಗಳ ಸೊಬಗಿನಲಿ ತಾ ಒಂದಾಗುತ.,
ಸುಪ್ತದಲಿ "ನಾಗರಜ"ನ ಸ್ಮರಿಸುತ ಸ್ತಬ್ದದಲಿ,
ಸ್ವರಗಳ ತಾ ಮಿಡಿಯುತ..!!

ರಾರಾಜಿಸುವ ಸವ್ಯ"ಸಾಚಿ ನ"ಯ ಗುಣಗಳ ಹಂದರದಲಿ..
"ರಾಜೇಶ" ಗುಣಗಳ ಮೊಳಗುತ..
"ಇತೇಷ"ಂ ಎಲ್ಲರೊಳೊಂದಾಗಿ ಬೆರೆಯುತ..
"ಶಿವಾನಂದ"ರ ನೇತೃತ್ವದಿ ನಮ್ಮೆಲ್ಲರ ಬಾಳು,
ಹಚ್ಚ ಹಸಿರಿನ ನಂದನವನವಾಗಲಿ.!
ಸದಾ ಸಂತೋಷದಿ ಸಾಗಲೆಂದು ನಲ್ಮೆಯಲಿ ಹರಸುತಾ..
ಭಾವದಲಿ ಭ್ರಮಿಸುತ.. ಸ್ನೇಹದಲಿ ಸೆಳೆಯುತ..
ಸಾಗುತಾ..ಎಂದೆಂದಿಗೂ ನಗುತಾ ನಗು ನಗುತಾ..!!!

Tuesday, September 22, 2009

ಮುಗ್ದ ಮನದ ಮಾತು..

ಮನದೊಳು ಹುದುಗಿಹ ಭಾವದ ಬೆಸುಗೆಯು,
ಬಣ್ಣಿಸಲಾಗದು ಪದಗಳ ಪರಿಚಯ,
ಮಾತಲಿ ಬೆರೆಯುತ, ಮೌನದಿ ಸೆಳೆಯುತ,
ಚಿತ್ತದಿ ಸ್ಮರಿಸುತ, ಸುಪ್ತದಿ ನೆಲೆಯಾದೆ ನಿನ್ನಲಿ ಓ ಸ್ನೇಹಿತ..!

ನಿನ್ನೊಡನಾಟಡಿ ಆ ಸ್ವಲ್ಪ ಹೊತ್ತು ,
ಬೇಸರದ ಬೇಗೆಯನ್ನು ಹೊಡೆದೋಡಿಸುತ್ತಿತ್ತು ,
ಹೃದಯದಿ ಹುದುಗಿಹ ಮುಗ್ದ ಮಾತುಗಳು ,
ನನ್ನೆದೆಯಾಳದಿ ವಿಹರಿಸಿದ ಸ್ವಪ್ನಗಳು ..!

ಸಮಯ ಸರಿದ ಗಳಿಗೆ ತಿಳಿಯುತ್ತಿರಲಿಲ್ಲ,
ನಿನ್ನೊಂದಿಗೆ ನಾನಿರುವಾಗ ಮನ ಕೊರಗುತ್ತಿರಲಿಲ್ಲ,
ಹುಚ್ಚು ಭಾವನೆಗಳು ಚಿತ್ತಾರ ಬರೆದಿತ್ತು,
ಮತ್ತೇರಿದ ಮನಸು ತುಸು ಯೋಚಿಸುತ್ತಿತ್ತು ..!

ಅರಿಯದ ಗೊಂದಲದ ಭಾವ ಗುನುಗಿತು,
ಮನದಿ ನೀನ್ಯಾರೆಂದು ನನಗರಿಯದಾಯಿತು,
ಮನಸಿನ ಮಹಲಲಿ ಸ್ತಬ್ದ ಚಿತ್ರಣ,
ಹೆದರಿತು ಮನ ಭಯದಿ ಆ ಕ್ಷಣ ..!

ಭಾವಗಳಾ ಬುತ್ತಿಯಲಿ ಮಂಕಾದೆ ನಾನು,
ಚಿಗುರಿದಾ ಸ್ವಪ್ನಕ್ಕೆ ನೀರೆರೆದೆ ನೀನು,
ಮನಸು ಮಾತಾಡಿದೆ ಮೌನದಲಿ,
ಚಿತ್ತ ತೇಲಾಡಿದೆ ಕನಸಿನಲಿ..!

ಭಯದ ಬಿರುಗಾಳಿಯಲಿ ಈ ಹೃದಯ,
ಮನದಿ ಮರೆಯಾಯಿತು ಓ ಗೆಳೆಯಾ,
ಸಮಯ ಸರಿಯಿತು, ವಿಚಲಿತಗೊಂಡಿತು,
ಮನದೊಳು ಮೌನ ಮುಸುಕಿತು, ನೀನಿಲ್ಲದಾ ಹೊತ್ತು..!

ಅಧರ ಅದುರಿತು, ಭಾವ ಧುಮ್ಮಿಕ್ಕಿತು,
ನೆನಹುಗಳು ಕಂಪಿಸಿ ತೇಲಾಡಿತು,
ನಿಲುಕದ ಭಾವವು ಚಿಲುಮೆಯ ಚರಣವು,
ಹೊಮ್ಮಿತು ತವಕದಿ ಅದ್ಬುತ ಕವನವು..!

ಆದರೂ ತಿಳಿಯಲಿಲ್ಲ ಭಾವದ ಬಿನ್ನಾಣ,
ಏನಾಯ್ತೋ ಈ ಮನಕೆ ನೀನಾದೆ ಪ್ರಾಣ,
ಭಾವ ಸಾಗರದ ಚಿಮ್ಮುವ ಅಲೆಯಲಿ ಆ ಹೊತ್ತಗೆಯಾ..,
ಪ್ರಶ್ನೆಗಳೇ ಉತ್ತರವಾಗಿ ಕಾಡಿತು ಕೊನೆಗೂ ನನ್ನೆದೆಯಾ...!!!

Tuesday, September 15, 2009

ನಾನು ನೀನು

ನೀನು ನಾನಾದಾಗ
ನಾನು ನೀನಾದೆ..
ನೀನು ಅವನಾದಾಗ
ನಾನು ಅವಳಾದೆ
ನೀನು ಅವಳಾದಾಗ
ನಾನು ಮರುಳಾದೆ
ನೀನು ಮರುಳಾದಾಗ
ನಾನು ಕೊಳಲಾದೆ
ನೀನು ಕೊಳಲಾದಾಗ
ನಾನು ದನಿಯಾದೆ
ನೀನು ದನಿಯಾದಾಗ
ನಾನು ಕೊರಳಾದೆ
ನೀನು ಕೊರಳಾದಾಗ
ನಾನು ಸ್ವರವಾದೆ
ನೀನು ಸ್ವರವಾದಾಗ
ನಾನು ಕರಗಿದೆ ..!!!

Thursday, September 10, 2009

ಓ ಪ್ರಿಯತಮ ಇದು ನ್ಯಾಯನಾ ...!!!???

ಪ್ರಿಯಾ.. ನೀನೇಕೆ ದೂರಾದೆ ನನ್ನಿಂದ ,
ಮನ ಮರುಗುತಿಹುದು ನಿನ್ನಯ ವಿರಹದಿಂದ ..,
ಕನಸೆಲ್ಲ ಕಾಡುತಿಹುದು,
ಮನಸೆಲ್ಲ ಬಾಡುತಿಹುದು,
ಪ್ರೀತಿಯ ಬರ ಬಡಿದಾ ಮನದ ದುಗುಡದಿಂದ ..
ಇನಿಯ ನೀ ಏಕೆ ಹೀಗಾದೆ ..?
ನೀನೇಕೆ ದೂರಾದೆ ನನ್ನಿಂದ ....??

ದಟ್ಟಡವಿಯಂತೆ ಮನದಲಿ ಕಪ್ಪಿಟ್ಟಿತು .,
ನಿನ್ನ ಸನಿಹವ ಬಯಸಿತು ತನು ,
ನಿನ್ನ ನೆನಪಿನಲಿ ದಿನವೆಲ್ಲ ಮೈಮರೆತು ,
ಕಾಯುತಿರುವೆ ನೀ ಬರುವ ಹಾದಿಯೆಡೆಗೆ ಮೊಗಮಡಿ ನಿಂತು.,
ನಲ್ಲ ನೀನೇಕೆ ಬರದೆ ಹೋದೆ ..,?
ನೀನೇಕೆ ದೂರಾದೆ ನನ್ನಿಂದ ....??

ಸ್ವರಗಳ ನಿನಾದ ಕೇಳುವ ಸಮಯದಿ ,
ಮನದ ಕಷ್ಟಗಳ ಸೆಲೆಯಲ್ಲಿ ನೀ ತುಂಬಿ ಬಂದೆ,
ನನ್ನ ಎದೆಯನ್ಗಳದಲಿ ಬಿಂಬಿತವಾದ ನಿನ್ನ ,
ಮರೆಯುವ ಪರಿ ನಾ ತಿಳಿಯದೆ ಕಂಗಾಲಾದೆ ,
ಜೀವನದಿ ಜೊತೆಯಾದ ಎಲ್ಲ ಕಹಿಗಳ ಮರೆತರೂ ..,
ಪ್ರಿಯತಮಾ .. ನಿನ್ನನೇ ನಾನೇಕೆ ಬಯಸಿದೆ ,
ನೀನೇಕೆ ದೂರಾದೆ ನನ್ನಿಂದಾ ..?
ನಿನಗೋಸ್ಕರ ಕಾಯುತಿರುವೆನು ಈ ತುಂಬು ಹೃದಯದಿಂದ ..!!!

Wednesday, September 9, 2009

ಅತಿಯಾದ ಪ್ರೀತಿಗೆ....

ಅತಿಯಾದ ಪ್ರೀತಿಗೆ ಮಾರು ಹೋದೆನಲ್ಲಾ ಚೆಲುವೆ..!
ಅದರೊಳಗಣ ಗುಟ್ಟು ನಾ ಅರಿಯಲಿಲ್ಲವೇ ..,
ನಾ ಜಾರಿದೆನಲ್ಲ ನಿನ್ನ ಪ್ರೀತಿಯ ಬುಟ್ಟಿಗೆ ..!!
ಇಟ್ಟಿತೊಂದು ಬರೆಯ ಬುಟ್ಟಿಯಲ್ಲಿಯ ಕಟ್ಟಿಗೆ ..!!!

ನೂಪುರವ ಧರಿಸಿ ಮನಸನ್ನು ಕ್ಷಣದಲ್ಲೇ ಸೆಳೆದು..,
ನಿನಾದದ ಗುಂಗಿಗೆ ಮನ ನಿನ್ನತ್ತ ಅಲೆದು ,
ಸ್ವಪ್ನಗಳ ಸಾಗರದತ್ತ ಈ ಸುಪ್ತ ಹರಿದು ..,!
ನಿನ್ನಲ್ಲೇ ನೆಲೆಯಾದೆ ನೆನಪುಗಳ ನೆನೆದು ..!!!

ನಿನ್ನ ಆ ಮುಂಗುರುಳು ಸೆಳೆಯಿತು ಮನವ ಕ್ಷಣದಲಿ,
ಹೃದಯವು ತೊದಲಿತು ಭಾವದಲಿ ..!
ಚಿತ್ತದಲಿ ಕೋಲಾಹಲದ ಛಾಯೆ ಚದುರಿತು ಭರದಲಿ,
ಮಾತು ಮರೆತು ಮಂಕಾದೆನು ಮೌನದಲಿ ..!!!

ಆದರೂ ಮನ ಹಂಬಲಿಸುತ್ತಿತ್ತು ನಿನ್ನನೇ..,
ಚಿತ್ತದಿ ಬಿಂಬಿಸುತ್ತಿತ್ತು ನಿನ್ನ ಕನಸನೆ ..,
ಮನದಿ ಮಂತ್ರಿಸುತ್ತಿತ್ತು ನಿನ್ನ ಮಾತನೆ ..!!
ನಾ ಮರೆತಿದ್ದೆ ನಿನ್ನೊಂದಿಗೆ ನನ್ನನೇ..,
ಬೆರೆತಿದ್ದೆ ನಿನ್ನಲೊಂದಾಗಿ ನಿನ್ನೊಡನೆ.. !!!




Tuesday, September 8, 2009

ಬಚ್ಚಿಟ್ಟ ಪ್ರೀತಿ.....

ಎದೆಯಾಂತರಾಳದಲಿ ಮೂಡಿತು,
ಅರಿಯದೆಲೆ ಚಿಗುರೊಡೆಯಿತು,
ಮನಸಿನಲಿ ಮನೆ ಮಾಡಿತು,
ಕನಸಿನಲಿ ಸ್ವರ ಮೀಟಿತು,
ಪ್ರೀತಿಯ ಒಲುಮೆ..!

ಪ್ರೀತಿಸಿದೆ ಪ್ರೀತಿಯ ಮನದಾಳದಲಿ
ಪೂಜಿಸಿದೆ ತನುವಿನಲಿ ಪ್ರೀತಿಯ ನುಡಿಗಳ
ಬಯಸಿದೆ ತಿಳಿಸಲು ಪ್ರೀತಿಯ,
ಅಂಜಿದೆ ಮನದಾಳದಲಿ ಅರಿಯದ ಭಾವದ ಗದ್ಗದಿತದಿ...!

ಹೃದಯದಿ ಪ್ರೀತಿಯ..,
ಪ್ರೀತಿಸಿದೆ ಪ್ರೀತಿಯಲಿ
ಪ್ರೀತಿಯ ಪ್ರೀತಿಸಿದರೂ
ಪರಿತಪಿಸಿದೆ ಪಡೆಯಲು
ಹಂಬಲಿಸಿದೆ ತೆರೆದಿಡಲುಮನದೊಳು ಬಚ್ಚಿಟ್ಟ ಪ್ರೀತಿಯ ..!!

ಕೊನೆವರೆಗೂ ಸಾಗಿದೆನು
ಪ್ರೀತಿಯ ನೌಕೆಯಲಿ
ಪ್ರೀತಿಗಾಗಿ ಪ್ರೀತಿಯ ಪ್ರೀತಿಸಲು
ಪ್ರೀತಿಗೋಸ್ಕರ ಪ್ರೀತಿಯಲಿ ಪರದಾಡಲು,
ಪ್ರೀತಿಯನ್ನೇ ಉಸಿರಾಗಿಸಿ ಉಸಿರಾಡಲು... !!!